ಜತ್ತಿ, ಬಸಪ್ಪ ದಾನಪ್ಪ
 	1912- . ಭಾರತ ಗಣರಾಜ್ಯದ ಉಪಾಧ್ಯಕ್ಷರು (1974). ಮೊದಲು ಒರಿಸ್ಸದ ರಾಜ್ಯಪಾಲರೂ ಪುದುಚೇರಿಯ ಉಪರಾಜ್ಯಪಾಲರೂ ಮೈಸೂರು ರಾಜ್ಯದ ಮಂತ್ರಿಯೂ ಮುಖ್ಯಮಂತ್ರಿಯೂ ಜಮಖಂಡಿ ಸಂಸ್ಥಾನದ ಮುಖ್ಯಮಂತ್ರಿಯೂ ಆಗಿದ್ದರು. ಜನನ 1912ರ ಸೆಪ್ಟೆಂಬರ್ 10ರಂದು, ಬಿಜಾಪುರ ಜಿಲ್ಲೆಯ ಜಮಖಂಡಿ ತಾಲ್ಲೂಕಿನ (ಆಗ ಸಂಸ್ಥಾನ) ಸಾವಳಗಿ ಗ್ರಾಮದಲ್ಲಿ, ತಂದೆ ದಾನಪ್ಪ ಜತ್ತಿ, ತಾಯಿ ಭಾಗವ್ವ. ದಾನಪ್ಪ ಜತ್ತಿಯವರು ಒಬ್ಬ ವ್ಯಾಪಾರಿ, ಅವರ ಮೂವರು ಗಂಡುಮಕ್ಕಳಲ್ಲಿ ಬಸಪ್ಪನವರು ಒಬ್ಬರು. ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢಶಾಲೆಗಳಲ್ಲಿ ಅಭ್ಯಾಸದ ಅನಂತರ ಕೊಲ್ಲಾಪುರದ ರಾಜಾರಾಂ ಕಾಲೇಜಿನಲ್ಲಿ ವ್ಯಾಸಂಗಮಾಡಿ ಆಟ್ರ್ಸ್ ಪದವಿಯನ್ನೂ ಸೈಕ್ಸ್ ಲಾ ಕಾಲೇಜಿನಲ್ಲಿ ಎಲ್‍ಎಲ್.ಬಿ. ಪದವಿಯನ್ನೂ ಗಳಿಸಿ (1940) ಜಮಖಂಡಿಯಲ್ಲಿ ವಕೀಲರಾಗಿ ಜೀವನ ಆರಂಭಿಸಿದರು (1940-45). ಅವರು ಬೇಗನೇ ಸಾರ್ವಜನಿಕ ಕ್ಷೇತ್ರ ಪ್ರವೇಶಮಾಡಿದರು. ಜಮಖಂಡಿಯ ಪೌರಸಭೆಯ ಸದಸ್ಯರಾಗಿ ಎರಡುಬಾರಿ ಆಯ್ಕೆ ಹೊಂದಿದರಲ್ಲದೆ ಅದರ ಅಧ್ಯಕ್ಷರಾಗಿಯೂ ಇದ್ದರು (1940-45). ಜಮಖಂಡಿ ಸಂಸ್ಥಾನದ ಪ್ರಜಾ ಪರಿಷತ್ತಿನ ಪ್ರಮುಖ ಕಾರ್ಯಕರ್ತರಲ್ಲಿ ಇವರೂ ಒಬ್ಬರಾಗಿದ್ದರು. ಜಮಖಂಡಿಯಲ್ಲಿ ಪ್ರಜಾಪ್ರತಿನಿಧಿ ಸರ್ಕಾರ ಸ್ಥಾಪನೆಯಾದಾಗ ಮಂತ್ರಿಮಂಡಳ ರಚಿಸುವ ಹೊಣೆ ಇವರದಾಯಿತು. 1947ರಲ್ಲಿ ಭಾರತ ಸ್ವತಂತ್ರವಾದಾಗ ಸಂಸ್ಥಾನಗಳ ಭವಿಷ್ಯದ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ ದಕ್ಷಿಣ ಸಂಸ್ಥಾನಗಳ ಒಕ್ಕೂಟರಚನೆಯ ಪ್ರಯತ್ನಗಳು ನಡೆದಿದ್ದುವು. ಜತ್ತಿಯವರು ಜಮಖಂಡಿ ಸಂಸ್ಥಾನಿಕರ ಮನವೊಲಿಸಿ ಭಾರತ ಒಕ್ಕೂಟದಲ್ಲಿ ಆ ಸಂಸ್ಥಾನ ವಿಲೀನಗೊಳ್ಳುವಂತೆ ಮಾಡಲು ಶ್ರಮಿಸಿದರು. ವಿಲೀನಗೊಂಡ ಪ್ರದೇಶಗಳ ಪ್ರನಿನಿಧಿಯಾಗಿ ಜತ್ತಿಯವರು ಮುಂಬಯಿ ವಿಧಾನಸಭೆಗೆ ನಾಮಕರಣ ಹೊಂದಿದರು ಮತ್ತು ಅಲ್ಲಿಯ ಮುಖ್ಯಮಂತ್ರಿ ಬಿ.ಜಿ ಖೇರರ ಸಂಸದೀಯ ಕಾರ್ಯದರ್ಶಿಯಾಗಿ ನೇಮಕಗೊಂಡರು (1948). 1952ರ ಚುನಾವಣೆಯಲ್ಲಿ ಮುಂಬಯಿ ವಿಧಾನಸಭೆಗೆ ಚುನಾಯಿತರಾಗಿ ಆ ರಾಜ್ಯದ ಆರೋಗ್ಯ ಮತ್ತು ಕಾರ್ಮಿಕ ಉಪಮಂತ್ರಿಯಾದರು.

1956ರಲ್ಲಿ ರಾಜ್ಯ ಪುನರ್ರಚನೆಯಾದ ಅನಂತರ ಜತ್ತಿಯವರು ನೂತನ ಮೈಸೂರು ರಾಜ್ಯದ (ಈಗ ಕರ್ನಾಟಕ) ಭೂಸುಧಾರಣಾ ಸಮಿತಿಯ ಅಧ್ಯಕ್ಷರಾಗಿ ನೇಮಕಗೊಂಡರು. ರಾಜ್ಯದ ಭೂಸುಧಾರಣಾ ಕಾಯಿದೆಗಳಿಗೆ ಜತ್ತಿ ಸಮಿತಿಯ ವರದಿ ತಳಹದಿಯಾಯಿತು. 1957 ಮತ್ತು 1967ರ ಚುನಾವಣೆಗಳಲ್ಲಿ ಅವರು ರಾಜ್ಯವಿಧಾನಸಭೆಗೆ ಆಯ್ಕೆಯಾದರು.

1958ರ ಜತ್ತಿಯವರು ಮೈಸೂರಿನ ವಿಧಾನ ಮಂಡಲ ಕಾಂಗ್ರೆಸ್ ಪಕ್ಷದ ನಾಯಕರಾಗಿ ಆಯ್ಕೆಯಾಗಿ ರಾಜ್ಯದ ಮುಖ್ಯಮಂತ್ರಿಯಾದರು. ಅನಿರೀಕ್ಷಿತವಾಗಿ ಬಂದ ಹೊಣೆಯನ್ನು ಜತ್ತಿಯವರು ದಕ್ಷತೆಯಿಂದ ನಿರ್ವಹಿಸಿದರು. 1962ರ ಚುನಾವಣೆಗಳ ಅನಂತರ ರಚಿತವಾದ ನಿಜಲಿಂಗಪ್ಪ ಮಂತ್ರಿಮಂಡಲದಲ್ಲಿ ಜತ್ತಿಯವರು ಹಣಕಾಸಿನ ಮಂತ್ರಿಯಾದರು-1965ರ ವರೆಗೆ ಆ ಹುದ್ದೆಯಲ್ಲಿದ್ದರು. ಅನಂತರ 1968ರ ವರೆಗೆ ಅವರು ಆಹಾರ ಮಂತ್ರಿಯಾಗಿದ್ದರು. ಅವರು ಪುದುಚೇರಿಯ ಉಪರಾಜ್ಯ ಪಾಲರಾಗಿ ನೇಮಕವಾದ್ದು 1968ರಲ್ಲಿ. 1973ರಲ್ಲಿ ಅವರು ಒರಿಸ್ಸದ ರಾಜ್ಯಪಾಲರಾದರು. 1973-74ರಲ್ಲಿ ಆ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಬಂದಾಗ ಜತ್ತಿಯವರು ಅದರ ಆಡಳಿತವನ್ನು ಯಶಸ್ವಿಯಾಗಿ ನಿರ್ವಹಿಸಿದರು.

ಬಸವೇಶ್ವರರ ಉಪದೇಶ ಮತ್ತು ವಿಚಾರಗಳ ಪ್ರಚಾರದ ಉದ್ದೇಶದಿಂದ ರಚಿತವಾಗಿರುವ ಬಸವ ಸಮಿತಿಗೆ ಜತ್ತಿಯವರು ಪ್ರಾರಂಭದಿಂದಲೂ ಅಧ್ಯಕ್ಷರಾಗಿದ್ದಾರೆ. ಸಣ್ಣ ವಯಸ್ಸಿನಿಂದಲೂ ಅವರು ಆಧ್ಯಾತ್ಮದಲ್ಲಿ ಒಲವು ಬೆಳೆಸಿಕೊಂಡಿದ್ದಾರೆ. ಸಂಗವ್ವನವರು ಜತ್ತಿಯವರ ಪತ್ನಿ. ಅವರಿಗೆ ಒಬ್ಬ ಪುತ್ರಿ, ಮೂವರು ಪುತ್ರರಿದ್ದಾರೆ.					 (ಎಸ್.ಡಿ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ